fbpx
ಸಮಾಚಾರ

ಮಂಗಳನ ಮೇಲೆ ನಾಸಾ ರೋವರ್‌ ಇಳಿಸಿದ್ದು ಹಮ್ಮೆಯ ಕನ್ನಡತಿ!

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ದ ಪರ್ಸೀವರೆನ್ಸ್ ರೋವರ್‌ ನೌಕೆ ಮಂಗಳನ ಅಂಗಳದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆದ ಐತಿಹಾಸಿಕ ಕ್ಷಣಕ್ಕೆ ಇಡೀ ಜಗತ್ತು ಸಾಕ್ಷಿಯಾಗಿದ್ದು, ಮಾರ್ಸ್ 2020 ಕಾರ್ಯಾಚರಣೆಯ ಮಾರ್ಗದರ್ಶನ, ಸಂಚರಣೆ ಮತ್ತು ನಿಯಂತ್ರಣ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದು ಭಾರತೀಯ ಮೂಲದ ಅಮೆರಿಕನ್ ವಿಜ್ಞಾನಿ ಸ್ವಾತಿ ಮೋಹನ್ ಎಂಬುದು ಹೆಮ್ಮೆಯ ವಿಚಾರ.

ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗ ದಂಪತಿ ಮೋಹನ್‌ ಹಾಗೂ ಜ್ಯೋತಿ ಅವರ ಪುತ್ರಿಯಾಗಿರುವ ಸ್ವಾತಿ, ನಾಸಾದಲ್ಲಿ ‘ಜಿಎನ್‌ ಅಂಡ್‌ ಸಿ’ ಎಂಬ ವೈಜ್ಞಾನಿಕ ತಂಡದ ಮುಖ್ಯಸ್ಥೆಯಾಗಿದ್ದಾರೆ. ಪರ್ಸೀವರೆನ್ಸ್‌ ರೋವರನ್ನು ಮಂಗಳ ಗ್ರಹದ ಮೇಲೆ ಇಳಿಸುವ ಜವಾಬ್ದಾರಿ ಸಂಪೂರ್ಣವಾಗಿ ಇವರ ತಂಡದ್ದಾಗಿತ್ತು. ಅದನ್ನು ಯಶಸ್ವಿಯಾಗಿ ನಿಭಾಯಿಸಿದ ಸ್ವಾತಿ ಅವರ ಬಗ್ಗೆ ಅಮೆರಿಕದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಸ್ವಾತಿ 1 ವರ್ಷದ ಮಗುವಾಗಿದ್ದಾಗಲೇ ಅವರ ತಂದೆ-ತಾಯಿ ಅಮೆರಿಕಕ್ಕೆ ವಲಸೆ ಹೋಗಿದ್ದರು. ಉತ್ತರ ವರ್ಜೀನಿಯಾ ಹಾಗೂ ವಾಷಿಂಗ್ಟನ್‌ ಡಿ.ಸಿ.ಯಲ್ಲಿ ಬೆಳೆದ ಸ್ವಾತಿ, ಕಾರ್ನೆಲ್‌ ಯುನಿವರ್ಸಿಟಿಯಲ್ಲಿ ಮೆಕ್ಯಾನಿಕಲ್‌ ಮತ್ತು ಏರೋಸ್ಪೇಸ್‌ ಎಂಜಿನಿಯರಿಂಗ್‌ನಲ್ಲಿ ಪದವಿ, ಮೆಸಾಚುಸೆಟ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಎಂಐಟಿ)ಯಲ್ಲಿ ಏರೋನಾಟಿಕ್ಸ್‌/ ಆಸ್ಟ್ರೋನಾಟಿಕ್ಸ್‌ ವಿಷಯದಲ್ಲಿ ಎಂ.ಎಸ್‌. ಹಾಗೂ ಪಿಎಚ್‌ಡಿ ಪಡೆದಿದ್ದಾರೆ. ನಾಸಾದಿಂದ ಶನಿ ಗ್ರಹಕ್ಕೆ ಕ್ಯಾಸಿನಿ ನೌಕೆಯನ್ನು ಕಳುಹಿಸಿದ ಯೋಜನೆಯಲ್ಲಿ, ಚಂದ್ರನಲ್ಲಿಗೆ ಗ್ರೇಲ್‌ ನೌಕೆಯನ್ನು ಕಳುಹಿಸಿದ ಯೋಜನೆಯಲ್ಲೂ ಇವರು ಕೆಲಸ ಮಾಡಿದ್ದಾರೆ. 2013ರಲ್ಲಿ ಆರಂಭವಾದ ನಾಸಾದ ಮಂಗಳಯಾನ-2020 ಯೋಜನೆಯಲ್ಲಿ ಶುರುವಿನಿಂದಲೂ ಕೆಲಸ ಮಾಡುತ್ತಿದ್ದಾರೆ.

ಇನ್ನು ನಾಸಾದ ನಿಯಂತ್ರಣ ಕೊಠಡಿಯಲ್ಲಿ ಶಾಂತ ಮತ್ತು ಸಂಯೋಜಿತವಾಗಿ ಕುಳಿತ ಸ್ವಾತಿ ಮೋಹನ್‌, ಜಿಎನ್ & ಸಿ( guidance, navigation and control)ಉಪವ್ಯವಸ್ಥೆ ಮತ್ತು ಯೋಜನೆಯ ಉಳಿದ ತಂಡದ ನಡುವೆ ಸಂವಹನ ಮತ್ತು ಸಮನ್ವಯ ಸಾಧಿಸಿ ಪರ್ಸೀವರೆನ್ಸ್ ರೋವರ್‌ ಯಶಸ್ವಿ ಲ್ಯಾಂಡಿಂಗ್‌ ಮಾಡಿಸಿದ್ದಾರೆ. ಒಂದು ಹಂತದಲ್ಲಿ ರೋವರ್‌ ಇಳಿಸುವಲ್ಲಿ ಪ್ರಮುಖ ಪಾತ್ರವನ್ನ ಸ್ವಾತಿ ಮೋಹನ್‌ ವಹಿಸಿಕೊಂಡಿದ್ದರು ಎಂದರೆ ತಪ್ಪಾಗಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top