ಮನೋರಂಜನೆ

“ಅಭಿಮಾನಿಗಳು ದಂಗೆ ಎದ್ದರೇ ಸರಿಯಿರಲ್ಲ”- ಸರ್ಕಾರದ ವಿರುದ್ಧ ಆಕ್ರೋಶಗೊಂಡ ರಮೇಶ್ ಭಟ್.

ಇಂದು ಕನ್ನಡ ಚಿತ್ರರಂಗದ ಮೇರುನಟರಲ್ಲೊಬ್ಬರಾದ ಸಾಹಸಸಿಂಹ, ಅಭಿನವ ಭಾರ್ಗವ ಡಾ.ವಿಷ್ಣುವರ್ಧನ್ ಅವರ 69ನೇ ಜನುಮದಿನ.. ಒಂದು ಕಡೆ ಖುಷಿಯಿಂದ ದಾದಾ ಸ್ಮರಣೆ ನಡೆಯುತ್ತಿದ್ದರೆ ಮತ್ತೊಂದು ಕಡೆ ಬೇಸರವೂ ಅಭಿಮಾನಿಗಳಲ್ಲಿ ಆವರಿಸಿದೆ. ಆ ಬೇಸರಕ್ಕೆ ಕಾರಣ ವಿಷ್ಣು ನಮ್ಮನ್ನಗಲಿ ಒಂಬತ್ತು ವರ್ಷಗಳು ಕಳೆದಿದ್ದರೂ ನೆಟ್ಟಗೆ ಒಂದು ಸ್ಮಾರಕದ ವ್ಯವಸ್ಥೆಯಾಗದಿರುವುದು.ಇದಕ್ಕೆ ಸರ್ಕಾರದ ಉಡಾಫೆ ಮತ್ತು ಚಿತ್ರರಂಗದ ನಿರ್ಲಕ್ಷ್ಯ ಮನೋಭಾವವೇ ಕಾರಣ ಎಂಬುದು ವಿಷ್ಣು ಅಭಿಮಾನಿಗಳ ಆರೋಪ. ವಿಷ್ಣು ನಿಧನದ ನಂತರ ಮೂರು ಬೇರೆ ಬೇರೆ ಸರ್ಕಾರಗಳು ಅಧಿಕಾರಕ್ಕೆ ಬಂದಿದ್ದರೂ ಸ್ಮಾರಕದ ವಿಚಾರದಲ್ಲಿ ಯಾವುದೇ ಪ್ರಯೋಜನವಾಗಿಲ್ಲ. ಸಾಕಷ್ಟು ವರ್ಷಗಳಿಂದಲೂ ವಿಷ್ಣು ಅಭಿಮಾನಿಗಳನ್ನು ಚಿಂತೆಯ ಮಡುವಿಗೆ ತಳ್ಳಿರುವ ವಿಷ್ಣು ಸ್ಮಾರಕ ವಿಚಾರ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಇದೇ ನೋವಿನಿಂದ ವಿಷ್ಣು ಸ್ಮಾರಕ ವಿಚಾರದಲ್ಲಿ ಹಿರಿಯ ನಟ ರಮೇಶ್ ಭಟ್ ಆಕ್ರೋಶಗೊಂಡಿದ್ದಾರೆ.

 

 

ಇಂದು ವಿಷ್ಣು ಪುಣ್ಯಭೂಮಿಗೆ ಭೇಟಿ ನೀಡಿ ಅಭಿಮಾನಿಗಳ ಜೊತೆ ವಿಷ್ಣು ಸಮಾಧಿಗೆ ನಮನ ಸಲ್ಲಿಸಿ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಅವರು ಸರ್ಕಾರದ ವಿರುದ್ಧ ಆಕ್ರೋಶಗೊಂಡರು. “ವಿಷ್ಣು ಸ್ಮಾರಕದ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ, ಸರ್ಕಾರ ಮನಸ್ಸು ಮಾಡಿದರೆ ಒಂದು ಸ್ವಲ್ಪ ಜಾಗ ಕೊಡುವುದು ದೊಡ್ಡ ವಿಷಯವೇನಲ್ಲ. ಆದರೆ ಸರ್ಕಾರಕ್ಕೆ ಯಾಕೋ ವಿಷ್ಣು ಸ್ಮಾರಕ ನಿರ್ಮಾಣ ಮಾಡುವುದು ಇಷ್ಟವಿಲ್ಲ ಅಂತ ಕಾಣುತ್ತಿದೆ. ವಿಷ್ಣು ನಿಧನದ ನಂತರ 5 ಜನ ಮುಖ್ಯಮಂತ್ರಿಗಳ ಜೊತೆ ಸ್ಮಾರಕದ ವಿಚಾರವಾಗಿ ಮಾತುಕತೆ ನಡೆಸಿದ್ದೇವೆ. ಅವ್ರ ಬಳಿ ಮಾತಾಡಿ ಮಾತಾಡಿ ತಮಗೂ ಸಾಕಾಗಿ ಹೋಗಿದೆ.”

“ವಿಷ್ಣು ನಿಧನದ ನಂತ್ರ ಈ ವರೆಗೆ ಮೂರು ಸರ್ಕಾರಗಳು ಬಂದಿವೆ, ಆದರೆ ಯಾವ ಸರ್ಕಾರಗಳು ಈ ಬಗ್ಗೆ ಸರಿಯಾಗಿ ನಿಗಾ ವಹಿಸಿಲ್ಲ. ಹೀಗಾಗಿ ಸರ್ಕಾರದವರು ನಾಚಿಕೆಯಿಂದ ತಲೆತಗ್ಗಿಸಬೇಕಾ ಅಥವಾ ನಾವುಗಳು ನಾಚಿಕೆ ಪಡಬೇಕಾ ಗೊತ್ತಾಗುತ್ತಿಲ್ಲ. ಸುಮಾರು ಹತ್ತು ವರ್ಷಗಳೇ ಕಳೆದುಹೋಯ್ತು ಇಲ್ಲಿಯವರೆಗೂ ಯಾವುದೇ ರೀತಿಯ ಸಕಾರತ್ಮಕವಾಗಿ ಕಾರ್ಯ ನಡೆಯದೇ ಇರುವುದು ನಮಗೆ ತುಂಬಾ ಬೇಸರ ತಂದಿದೆ.. ಅಭಿಮಾನಿಗಳು ದಂಗೆ ಎದ್ದಾಗ ಮಾತ್ರ ಸರಕಾರ ಎಚ್ಚುತ್ತುಕೊಳ್ಳೋ ಹಾಗೆ ಕಾಣುತ್ತಿದೆ. ಅಭಿಮಾನಿಗಳು ಏನಾದರೂ ದಂಗೆ ಎದ್ದರೆ ಸರಿಯಿರಲ್ಲ.. ಅಂತಹ ಯಾವುದೇ ಅಹಿತಕರ ಘಟನೆ ನಡೆಯುವ ಮೊದಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ” ಎಂದು ರಮೇಶ್ ಭಟ್ ಖಾರವಾಗಿ ಮಾತನಾಡಿದರು.

 


ಸ್ಮಾರಕದ ಕತೆ ಎಲ್ಲಿಗೆ ಬಂದಿದೆ?
ಒಂದು ಕಡೆ ವಿಷ್ಣು ಕುಟುಂಬದವರು ಸಮಾಧಿಯನ್ನೇ ಸ್ಥಳಾಂತರಿಸಿ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸುವ ತೀರ್ಮಾನ ತೆಗೆದುಕೊಂಡಿದ್ದರೇ ಇತ್ತ ಅವರ ಅಭಿಮಾನಿಗಳು ವಿಷ್ಣು ಸ್ಮಾರಕ ಬೆಂಗಳೂರಿನಲ್ಲಿ ಆಗಬೇಕು ಎಂದು ಪಟ್ಟುಹಿಡಿದು ಕೂತಿದ್ದಾರೆ.. ಇದು ಮಾತ್ರವಲ್ಲದೆ ಸ್ಮಾರಕಕ್ಕೆ ಸರ್ಕಾರ ಮಂಜೂರು ಮಾಡಿರುವ ಸ್ಥಳದ ಮೇಲೂ ಕಾನೂನಾತ್ಮಕವಾಗಿ ಅನೇಕ ತಕರಾರುಗಳಿವೆ..ಸರ್ಕಾರ ಮನಸ್ಸು ಮಾಡಿದರೆ ಇವೆಲ್ಲಾ ಸಮಸ್ಯೆಗಳೇ ಅಲ್ಲ, ಕ್ಷಣ ಮಾತ್ರದಲ್ಲಿ ಎಲ್ಲಾ ತೊಡಕುಗಳನ್ನು ಬಗೆಹರಿಸಿ ವಿಷ್ಣುದಾದನಿಗೊಂದು ಭವ್ಯ ಸ್ಮಾರಕ ನಿರ್ಮಿಸಬಹುದು. ಆದರೆ ಅದ್ಯಾವ ಕಾರಣಕ್ಕೆ ವಿಷ್ಣು ಸ್ಮಾರಕ ನಿರ್ಮಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ. ಇದರ ಹಿಂದೆ ಯಾವ ಕೈಗಳ ಕೆಲಸ ಅಡಗಿದೆ ಎಂಬುದು ವಿಷ್ಣು ಮತ್ತು ಕನ್ನಡ ಅಭಿಮಾನಿಗಳ ಯಕ್ಷ ಪ್ರಶ್ನೆಯಾಗಿದೆ. ಒಟ್ಟಿನಲ್ಲಿ ಕನ್ನಡಿಗರ ಹೃದಯಗಳಲ್ಲಿ ಶಾಶ್ವತವಾಗಿ ಮನೆಮಾಡಿರುವ ವಿಷ್ಣುವರ್ಧನ್ ಅವರ ಸ್ಮಾರಕಕ್ಕೆ ಕಂದಕಗಳು ಎದುರಾಗುತ್ತಲೇ ಇವೆ.

ಸಾಹಸಸಿಂಹ ಬದುಕಿದ್ದಷ್ಟೂ ದಿನ ಯಾರ ಮುಂದೆ ಯಾವುದಕ್ಕೂ ಕೈ ಚಾಚದೆ ಸ್ವಾಭಿಮಾನದಿಂದ ಉಸಿರಾಡಿದ್ದವರು. ಅಂಥಾ ಮೇರು ವ್ಯಕ್ತಿಯ ಸ್ಮಾರಕಕ್ಕಾಗಿ ಕಂಡೋರ ಮರ್ಜಿಗೆ ಕಾಯುವಂತಾದ ದೌರ್ಭಾಗ್ಯದ ಬಗ್ಗೆ ವಿಷ್ಣು ಅಭಿಮಾನಿಗಳಲ್ಲಿ ತೀವ್ರವಾದ ಬೇಸರ ಮನೆ ಮಾಡಿ ವರ್ಷಗಳೇ ಕಳೆಯುತ್ತಿವೆ.. ಈ ಹಿಂದಿನ ಮುಖ್ಯಮಂತ್ರಿಗಳು ಈ ಬಗ್ಗೆ ತಾತ್ಸಾರವನ್ನಷ್ಟೇ ತೋರಿಸಿದ್ದರು. ಈಗ ಕೆಮುಖ್ಯಮಂತ್ರಿ ಕುಮಾರಸ್ವಾಮಿಯವರೂ ಕೂಡ ಅದನ್ನೇ ಮಾಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top