ಮನೋರಂಜನೆ

“ಅಭಿಮಾನಿಗಳು ರೊಚ್ಚಿಗೇಳೋ ಮುಂಚೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು” ಭಾರತಿ ವಿಷ್ಣುವರ್ಧನ್‌ ಫೈನಲ್ ವಾರ್ನಿಂಗ್.

ಇಂದು ಕನ್ನಡ ಚಿತ್ರರಂಗದ ಮೇರುನಟರಲ್ಲೊಬ್ಬರಾದ ಸಾಹಸಸಿಂಹ, ಅಭಿನವ ಭಾರ್ಗವ ಡಾ.ವಿಷ್ಣುವರ್ಧನ್ ಅವರ 69ನೇ ಜನುಮದಿನ.. ಒಂದು ಕಡೆ ಖುಷಿಯಿಂದ ದಾದಾ ಸ್ಮರಣೆ ನಡೆಯುತ್ತಿದ್ದರೆ ಮತ್ತೊಂದು ಕಡೆ ಬೇಸರವೂ ಅಭಿಮಾನಿಗಳಲ್ಲಿ ಆವರಿಸಿದೆ. ಆ ಬೇಸರಕ್ಕೆ ಕಾರಣ ವಿಷ್ಣು ನಮ್ಮನ್ನಗಲಿ ಒಂಬತ್ತು ವರ್ಷಗಳು ಕಳೆದಿದ್ದರೂ ನೆಟ್ಟಗೆ ಒಂದು ಸ್ಮಾರಕದ ವ್ಯವಸ್ಥೆಯಾಗದಿರುವುದು.ಇದಕ್ಕೆ ಸರ್ಕಾರದ ಉಡಾಫೆ ಮತ್ತು ಚಿತ್ರರಂಗದ ನಿರ್ಲಕ್ಷ್ಯ ಮನೋಭಾವವೇ ಕಾರಣ ಎಂಬುದು ವಿಷ್ಣು ಅಭಿಮಾನಿಗಳ ಆರೋಪ. ವಿಷ್ಣು ನಿಧನದ ನಂತರ ಮೂರು ಬೇರೆ ಬೇರೆ ಸರ್ಕಾರಗಳು ಅಧಿಕಾರಕ್ಕೆ ಬಂದಿದ್ದರೂ ಸ್ಮಾರಕದ ವಿಚಾರದಲ್ಲಿ ಯಾವುದೇ ಪ್ರಯೋಜನವಾಗಿಲ್ಲ. ಸಾಕಷ್ಟು ವರ್ಷಗಳಿಂದಲೂ ವಿಷ್ಣು ಅಭಿಮಾನಿಗಳನ್ನು ಚಿಂತೆಯ ಮಡುವಿಗೆ ತಳ್ಳಿರುವ ವಿಷ್ಣು ಸ್ಮಾರಕ ವಿಚಾರ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಇದೇ ನೋವಿನಿಂದ ವಿಷ್ಣು ಸ್ಮಾರಕ ವಿಚಾರದಲ್ಲಿ ಸಾಹಸಸಿಂಹ ಪತ್ನಿ ಭಾರತಿ ವಿಷ್ಣುವರ್ಧನ್ ಫೈನಲ್ ವಾರ್ನಿಂಗ್ ನೀಡಿದ್ದಾರೆ.

 

 

ಜಯನಗರದ ನಿವಾಸದಲ್ಲಿ ವಿಷ್ಣು ಕುಟುಂಬ ಯಜಮಾನನ ಹುಟ್ಟುಹಬ್ಬವನ್ನು ಆಚರಿಸಿತು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಭಾರತಿ ವಿಷ್ಣುವರ್ಧನ್ “ನಾನು ಇರೋವರೆಗೂ ವಿಷ್ಣು ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತೇನೆ. ವಿಷ್ಣು ನಿಧನದ ನಂತರ 6 ಜನ ಮುಖ್ಯಮಂತ್ರಿಗಳ ಜೊತೆ ವಿಷ್ಣು ಸ್ಮಾರಕದ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ. ಅವ್ರ ಬಳಿ ಮಾತಾಡಿ ಮಾತಾಡಿ ತಮಗೂ ಸಾಕಾಗಿ ಹೋಗಿದೆ. ಇತ್ತೀಚೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವ್ರನ್ನ ಕೂಡ ಭೇಟಿಯಾಗಿ ಬಂದಿದ್ದೇವು ಆದರೇ ಯಾವುದೇ ಪ್ರಯೋಜನವಾಗಿಲ್ಲ. ಇನ್ನೆಷ್ಟು ವರ್ಷಗಳು ಕಾಯಬೇಕೊ ಗೊತ್ತಿಲ್ಲ., ಅಭಿಮಾನಿಗಳು ಏನಾದರೂ ರೊಚ್ಚಿಗೆದ್ದರೆ ಅವರ ಕಛೇರಿಗೆ ಮುತ್ತಿಗೆ ಹಾಕುತ್ತಾರೆ.. ಇಂತಹ ಅಹಿತಕರ ಘಟನೆ ನಡೆಯುವ ಮೊದಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ” ಎಂದು ಸರ್ಕಾರಕ್ಕೆ ವಾರ್ನಿಂಗ್ ನೀಡಿದರು.

ಒಂದು ಕಡೆ ವಿಷ್ಣು ಕುಟುಂಬದವರು ಸಮಾಧಿಯನ್ನೇ ಸ್ಥಳಾಂತರಿಸಿ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸುವ ತೀರ್ಮಾನ ತೆಗೆದುಕೊಂಡಿದ್ದರೇ ಇತ್ತ ಅವರ ಅಭಿಮಾನಿಗಳು ವಿಷ್ಣು ಸ್ಮಾರಕ ಬೆಂಗಳೂರಿನಲ್ಲಿ ಆಗಬೇಕು ಎಂದು ಪಟ್ಟುಹಿಡಿದು ಕೂತಿದ್ದಾರೆ.. ಇದು ಮಾತ್ರವಲ್ಲದೆ ಸ್ಮಾರಕಕ್ಕೆ ಸರ್ಕಾರ ಮಂಜೂರು ಮಾಡಿರುವ ಸ್ಥಳದ ಮೇಲೂ ಕಾನೂನಾತ್ಮಕವಾಗಿ ಅನೇಕ ತಕರಾರುಗಳಿವೆ.. ಒಟ್ಟಿನಲ್ಲಿ ಕನ್ನಡಿಗರ ಹೃದಯಗಳಲ್ಲಿ ಶಾಶ್ವತವಾಗಿ ಮನೆಮಾಡಿರುವ ವಿಷ್ಣುವರ್ಧನ್ ಅವರ ಸ್ಮಾರಕಕ್ಕೆ ಕಂದಕಗಳು ಎದುರಾಗುತ್ತಲೇ ಇವೆ.

ಸಾಹಸಸಿಂಹ ಬದುಕಿದ್ದಷ್ಟೂ ದಿನ ಯಾರ ಮುಂದೆ ಯಾವುದಕ್ಕೂ ಕೈ ಚಾಚದೆ ಸ್ವಾಭಿಮಾನದಿಂದ ಉಸಿರಾಡಿದ್ದವರು. ಅಂಥಾ ಮೇರು ವ್ಯಕ್ತಿಯ ಸ್ಮಾರಕಕ್ಕಾಗಿ ಕಂಡೋರ ಮರ್ಜಿಗೆ ಕಾಯುವಂತಾದ ದೌರ್ಭಾಗ್ಯದ ಬಗ್ಗೆ ವಿಷ್ಣು ಅಭಿಮಾನಿಗಳಲ್ಲಿ ತೀವ್ರವಾದ ಬೇಸರ ಮನೆ ಮಾಡಿ ವರ್ಷಗಳೇ ಕಳೆಯುತ್ತಿವೆ.. ಈ ಹಿಂದಿನ ಮುಖ್ಯಮಂತ್ರಿಗಳು ಈ ಬಗ್ಗೆ ತಾತ್ಸಾರವನ್ನಷ್ಟೇ ತೋರಿಸಿದ್ದರು. ಈಗ ಕೆಮುಖ್ಯಮಂತ್ರಿ ಕುಮಾರಸ್ವಾಮಿಯವರೂ ಕೂಡ ಅದನ್ನೇ ಮಾಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top