ಮನೋರಂಜನೆ

ಯಜಮಾನನ ಹುಟ್ಟುಹಬ್ಬದಂದು ನೋವಿನ ಪತ್ರ ಬರೆದ ಕವಿರತ್ನ ನಾಗೇಂದ್ರ ಪ್ರಸಾದ್.

ಇಂದು ಸಾಹಸಸಿಂಹ, ಅಭಿನವ ಭಾರ್ಗವ ಡಾ.ವಿಷ್ಣುವರ್ಧನ್ ಅವರ 69ನೇ ಜನುಮದಿನ.. ಒಂದು ಕಡೆ ಖುಷಿಯಿಂದ ದಾದಾ ಸ್ಮರಣೆ ನಡೆಯುತ್ತಿದ್ದರೆ ಮತ್ತೊಂದು ಕಡೆ ಬೇಸರವೂ ಅಭಿಮಾನಿಗಳಲ್ಲಿ ಆವರಿಸಿದೆ. ಆ ಬೇಸರಕ್ಕೆ ಕಾರಣ ವಿಷ್ಣು ನಮ್ಮನ್ನಗಲಿ ಒಂಬತ್ತು ವರ್ಷಗಳು ಕಳೆದಿದ್ದರೂ ನೆಟ್ಟಗೆ ಒಂದು ಸ್ಮಾರಕದ ವ್ಯವಸ್ಥೆಯಾಗದಿರುವುದು.ಇದಕ್ಕೆ ಸರ್ಕಾರದ ಉಡಾಫೆ ಮತ್ತು ಚಿತ್ರರಂಗದ ನಿರ್ಲಕ್ಷ್ಯ ಮನೋಭಾವವೇ ಕಾರಣ ಎಂಬುದು ವಿಷ್ಣು ಅಭಿಮಾನಿಗಳ ಆರೋಪ. ವಿಷ್ಣು ನಿಧನದ ನಂತರ ಮೂರು ಬೇರೆ ಬೇರೆ ಸರ್ಕಾರಗಳು ಅಧಿಕಾರಕ್ಕೆ ಬಂದಿದ್ದರೂ ಸ್ಮಾರಕದ ವಿಚಾರದಲ್ಲಿ ಯಾವುದೇ ಪ್ರಯೋಜನವಾಗಿಲ್ಲ. ಸಾಕಷ್ಟು ವರ್ಷಗಳಿಂದಲೂ ವಿಷ್ಣು ಅಭಿಮಾನಿಗಳನ್ನು ಚಿಂತೆಯ ಮಡುವಿಗೆ ತಳ್ಳಿರುವ ವಿಷ್ಣು ಸ್ಮಾರಕ ವಿಚಾರ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಇದೇ ನೋವಿನಲ್ಲಿ ವಿಷ್ಣುವಿನ ಹುಟ್ಟುಹಬ್ಬಕ್ಕೆ ವಿ. ನಾಗೇಂದ್ರ ಪ್ರಸಾದ್ ಪತ್ರ ಬರೆದಿದ್ದಾರೆ.

ನಾಗೇಂದ್ರ ಪ್ರಸಾದ್ ಅವರು ತಮ್ಮ ಫೇಸ್ಬುಕ್ ಮೂಲಕ ನೋವಿನ ನುಡಿಗಳನ್ನು ಆಡಿದ್ದು ಅದರ ಯಥಾವತ್ತು ರೂಪ ಈ ರೀತಿ ಇದೆ.

ಕ್ಷಮಿಸಿ ದಾದಾ…. ಹುಟ್ಟು ಹಬ್ಬದ ಶುಭಾಶಯಗಳು
+————————————————————+
ಕಳೆದ ಒಂಭತ್ತು ವರ್ಷದಿಂದ ಮಾನ್ಯ ಕುಮಾರ ಸ್ವಾಮಿಯವರೂ ಸೇರಿದಂತೆ 5 ಮುಖ್ಯಮಂತ್ರಿಗಳು.
ಬಹುತೇಕ ಎಲ್ಲರನ್ನೂ ಭೇಟಿ ಮಾಡಿದ್ದೇನೆ.
ಡಾ.ವಿಷ್ಣು ಸ್ಮಾರಕದ ಸಮಸ್ಯೆಗೆ ಒಂದು ಅಂತ್ಯ ಹಾಡಿ ಪುಣ್ಯ ಕಟ್ಟಿಕೊಳ್ಳುವಂತೆ ಒತ್ತಾಯಿಸಿದ್ದೇನೆ.
ಎಲ್ಲರದ್ದೂ ಒಂದೇ ಮಾತು…

” ನಮಗೇನೋ ಸ್ಮಾರಕ ಇಲ್ಲೇ ಇರಬೇಕು ಅಂತ ಆಸೆ
ಅವರ ಮನೇವ್ರನ್ನ ಒಪ್ಪಿಸಿ. ನಮ್ಮದೇನೂ ಅಭ್ಯಂತರ ಇಲ್ಲ.
ಅವರು ಒಪ್ಪಿದರೆ ತಕ್ಷಣ ಮುಂದಿನ ಕೆಲಸ ಮಾಡ್ತೀವಿ.”

ವಿಷ್ಣು ವ್ಯಕ್ತಿತ್ವದ ಪರಿಚಯವಿಲ್ಲದ ಬಾಲಣ್ಣನವರ ಮಗ ಖಾಸಗೀ ವಾಹಿನಿಯೊಂದರಲ್ಲಿ ಬಡಬಡಿಸಿದ ಒಂದು ವಾಕ್ಯ ದಾದಾ ಕುಟುಂಬಕ್ಕೆ ನೋವು ತಂದಿತು.

“ಸಿಟ್ಟಿನಿಂದ ಅಲ್ಲಿ ಸ್ಮಾರಕ ಬೇಡ. ನಾವಲ್ಲಿ ಕಾಲು ಇಡುವುದಿಲ್ಲ” ಅಂದರು.
ಆ ವ್ಯಕ್ತಿಯ ಮಾತುಗಳು ಅಭಿಮಾನಿಗಳನ್ನೂ ಘಾಸಿಗೊಳಿಸಿತು.
ಇನ್ನೂ ಅನೇಕ ಬೆಳವಣಿಗೆಗಳು ನಡೆದವು. ಆದರೆ ಯಾವುವೂ ಸ್ಮಾರಕ ನಿರ್ಮಾಣಕ್ಕೆ ಪೂರಕವಾಗಲಿಲ್ಲ. ಬದಲಾಗಿ ಎಲ್ಲವೂ ತಲೆಕೆಳಗಾಯಿತು.

ಕೊನೆಗೆ ತಬ್ಬಲಿಯಾದದ್ದು ಮಾತ್ರ ಅಭಿಮಾನಿ!!!

ಇನ್ನೊಂದು ವರ್ಷ ಕಳೆದರೆ ಬರೊಬರಿ 10 ವರ್ಷಗಳಾಗುತ್ತವೆ..
ಇದು ಡಾ.ವಿಷ್ಣುವರ್ಧನ್ ರಂತಹಾ ಮಹಾನ್ ಕಲಾವಿದನಿಗೆ
ಸರ್ಕಾರಗಳು ಹಾಗೂ ನಾಡು ಮಾಡಿದ ಅವಮಾನ.

ಅಭಿಮಾನಿಗಳೇ ಸೇರಿ ಸ್ಮಾರಕ ಮಾಡಲು ಸಿದ್ಧವಾಗುವ ಹಂತಕ್ಕೆ ದೂಡಿದ್ದೀರಿ. ಅದೇ ಆದರೂ ಆಗಬಹುದು.

ಇದು ಅಭಿಮಾನಿಯಾಗಿ ಮಾತ್ರವಲ್ಲ ಒಬ್ಬ ಸಾಮಾನ್ಯ ಕನ್ನಡಿಗನಾಗಿ ನನ್ನ ನೋವು.
ಡಾ.ವಿಷ್ಣು ಸ್ಮಾರಕ ಹೀಗೆ ನೆನೆಗುದಿಗೆ ಬಿದ್ದಿರುವುದು ಕನ್ನಡಿಗರು ಕನ್ನಡವನ್ನೇ ಅವಮಾನಿಸಿದಂತೆ.
ಬಾಲಣ್ಣನವರ ಕುಟುಂಬವನ್ನೂ, ಸರ್ಕಾರವನ್ನೂ
ಅಪಾರ ನೋವಿನಂದಲೇ ವಿನಂತಿಸುತ್ತೇನೆ.
ಪುಣ್ಯ ಭೂಮಿ ಉಳಿಸಿಕೊಡಿ. ನಿಮಗೆ ಪುಣ್ಯ ಬರಲಿ.
— ವಿ.ನಾಗೇಂದ್ರ ಪ್ರಸಾದ್…

ಒಂದು ಕಡೆ ವಿಷ್ಣು ಕುಟುಂಬದವರು ಸಮಾಧಿಯನ್ನೇ ಸ್ಥಳಾಂತರಿಸಿ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸುವ ತೀರ್ಮಾನ ತೆಗೆದುಕೊಂಡಿದ್ದರೇ ಇತ್ತ ಅವರ ಅಭಿಮಾನಿಗಳು ವಿಷ್ಣು ಸ್ಮಾರಕ ಬೆಂಗಳೂರಿನಲ್ಲಿ ಆಗಬೇಕು ಎಂದು ಪಟ್ಟುಹಿಡಿದು ಕೂತಿದ್ದಾರೆ.. ಇದು ಮಾತ್ರವಲ್ಲದೆ ಸ್ಮಾರಕಕ್ಕೆ ಸರ್ಕಾರ ಮಂಜೂರು ಮಾಡಿರುವ ಸ್ಥಳದ ಮೇಲೂ ಕಾನೂನಾತ್ಮಕವಾಗಿ ಅನೇಕ ತಕರಾರುಗಳಿವೆ.. ಒಟ್ಟಿನಲ್ಲಿ ಕನ್ನಡಿಗರ ಹೃದಯಗಳಲ್ಲಿ ಶಾಶ್ವತವಾಗಿ ಮನೆಮಾಡಿರುವ ವಿಷ್ಣುವರ್ಧನ್ ಅವರ ಸ್ಮಾರಕಕ್ಕೆ ಕಂದಕಗಳು ಎದುರಾಗುತ್ತಲೇ ಇವೆ.

ಸಾಹಸಸಿಂಹ ಬದುಕಿದ್ದಷ್ಟೂ ದಿನ ಯಾರ ಮುಂದೆ ಯಾವುದಕ್ಕೂ ಕೈ ಚಾಚದೆ ಸ್ವಾಭಿಮಾನದಿಂದ ಉಸಿರಾಡಿದ್ದವರು. ಅಂಥಾ ಮೇರು ವ್ಯಕ್ತಿಯ ಸ್ಮಾರಕಕ್ಕಾಗಿ ಕಂಡೋರ ಮರ್ಜಿಗೆ ಕಾಯುವಂತಾದ ದೌರ್ಭಾಗ್ಯದ ಬಗ್ಗೆ ವಿಷ್ಣು ಅಭಿಮಾನಿಗಳಲ್ಲಿ ತೀವ್ರವಾದ ಬೇಸರ ಮನೆ ಮಾಡಿ ವರ್ಷಗಳೇ ಕಳೆಯುತ್ತಿವೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top