ಸಮಾಚಾರ

ಮಹಾ ಮಸ್ತಕಾಭಿಷೇಕಕ್ಕೆ ಸರ್ಕಾರ ಏಕೆ ಅನುದಾನ ನೀಡುತ್ತದೆ ಗೊತ್ತೇ

ಈ ವರ್ಷದ ಪ್ರಾರಂಭದಲ್ಲಿ ಫೆಬ್ರುವರಿ ತಿಂಗಳಿನಲ್ಲಿ ಶ್ರವಣಬೆಳಗೊಳದಲ್ಲಿರುವ ಗೊಮ್ಮಟೇಶ್ವರರ ಬೃಹತ್ ಏಕಶಿಲಾ ಮೂರ್ತಿಗೆ ಮಹಾಮಸ್ತಕಾಭಿಷೇಕ ಭವ್ಯವಾಗಿ ಜರುಗಿದೆ. ವಿಶ್ವದ ನಾನಾ ಭಾಗಗಳಿಂದ ಅನೇಕ ಭಕ್ತಾದಿಗಳು ಆಗಮಿಸಿ ಈ ಭವ್ಯ ಉತ್ಸವನ್ನು ನೋಡಿ ಕಣ್ಣು ತುಂಬಿಕೊಂಡರು. ಮಹಾಮಸ್ತಕಾಭಿಷೇಕಕ್ಕೆ ಕರ್ನಾಟಕ ರಾಜ್ಯ ಸರ್ಕಾರ ನೂರು ಕೋಟಿಗೂ ಅಧಿಕ ಅನುದಾನವನ್ನು ನೀಡಿತ್ತು. ಆಗ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಸರ್ಕಾರ ಇಷ್ಟೇಕೆ ಅನುಧಾನ ನೀಡುತ್ತಿದೆ ಎಂದು ಪ್ರಶ್ನೆ ಮಾಡಿದ್ದರು. ಈಗ ಅದಕ್ಕೆ ಉತ್ತರ ಎಂಬಂತೆ ಮಾಹಿತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮುಂದೆ ಓದಿ

 

 

 

ಅಹಿಂಸೆಯ ಪ್ರತಿಪಾದಕ ಧರ್ಮದ ಪ್ರಥಮ ಮೋಕ್ಷಗಾಮಿ, ತ್ಯಾಗವೀರ ಬಾಹುಬಲಿ ಎಂದರೆ ನೆನಪಾಗುವುದು ಶ್ರವಣಬೆಳಗೊಳ. ಅಖಂಡ ಚಕ್ರವರ್ತಿಯಾಗಿದ್ದ ತಾನು ಯುದ್ದ ಮಾಡಿ, ಸಾವು ನೋವುಗಳಿಗೆ ಕಾರಣನಾಗಬಾರದೆಂದು ಎಲ್ಲವನ್ನೂ ತೊರೆದು ಸರ್ವಸ್ವವನ್ನೂ ತ್ಯಾಗ ಮಾಡಿದ ಬಾಹುಬಲಿಯ ಜೀವನ ನಮ್ಮೆಲ್ಲರಿಗೂ ಜೀವನಾದರ್ಶ.

ಹೀಗೆ ತ್ಯಾಗಮಾಡಿದ ನಂತರ ನಿಂತ ನೆಲದಲ್ಲೇ ಕಠಿಣ ತಪಸ್ಸು ಮಾಡಿ ಮೋಕ್ಷ ಪಡೆದ ಬಾಹುಬಲಿಯ 108 ಅಡಿಯ ವಿಗ್ರಹ ಪೌದನಪುರವೆಂಬಲ್ಲಿ ಇತ್ತು ಎಂದು ಪ್ರತೀತಿ. ಈ ಪೌದನಪುರಕ್ಕೆ ಹೊಗಿ ದರ್ಶನ ಮಾಡಿ ಬರಲು ಕಠಿಣವಾದ್ದರಿಂದ ಚಾವುಂಡರಾಯನು ಶ್ರವಣಬೆಳಗೊಳದಲ್ಲಿ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮೂರ್ತಿ ನಿರ್ಮಾಣ ಮಾಡಿ ಮಹಾ ಮಸ್ತಕಾಭಿಷೇಕ ನೆರವೇರಿಸಿದ.

ಹೀಗೆ ನಂತರದ ದಿನಗಳಲ್ಲಿ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನಡೆದುಕೊಂಡು ಬಂದಿದೆ. ಹೀಗೆ ಅನಾದಿಕಾಲದಿಂದ ನಡೆದುಕೋಡು ಬಂದಿರುವ ಈ ಮಹೋತ್ಸವಕ್ಕೆ ಸರ್ಕಾರ ಏಕೆ ಅನುದಾನ ನೀಡುತ್ತಿದೆ ….? ಎಲ್ಲವನ್ನೂ ಬಿಟ್ಟ ತ್ಯಾಗವೀರನಿಗೆ ಏಕೆ ಇಷ್ಟೊಂದು ಖರ್ಚು ಮಾಡಬೇಕು ಎಂದು ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. ಆದರೆ ಸರ್ಕಾರ ಈ ಕಾರ್ಯಕ್ರಮಕ್ಕೆ ಮೂಲಸೌಕರ್ಯ ಮತ್ತು ಇನ್ನಿತರ ವ್ಯವಸ್ಥೆಗಳಿಗಾಗಿ ಅನುದಾನ ನೀಡುತ್ತಿರುವ ಹಿಂದೆ ಒಂದು ಕಾರಣವಿದೆ.
ಬಹಳ ವರ್ಷಗಳ ಹಿಂದೆ ಮೈಸೂರಿನ ಶ್ರಿರಂಗಪಟ್ಟಣದ ಬಳಿ ಒಬ್ಬ ಜೈನ ಶ್ರೇಷ್ಠಿ ವ್ಯಾಪಾರಿಯೊಬ್ಬನಿದ್ದ. ಬಹಳ ದೊಡ್ಡ ವರ್ತಕನಾಗಿದ್ದ ಈತನ ಶ್ರೀಮಂತಿಕೆ ಬಹಳ ಇತ್ತು. ಆದರೂ ಧರ್ಮಮಾರ್ಗವನ್ನು ತೊರೆಯದೇ ವ್ಯಾಪಾರವನ್ನು ನಡೆಸಿಕೊಂಡು ಬರುತ್ತಿದ್ದ. ವ್ಯಾಪಾರದಲ್ಲಾಗಲೀ ಕಟ್ಟುವ ತೆರಿಗೆಯಲ್ಲಾಗಲೀ ಮೋಸವಿರಲಿಲ್ಲ. ದಾನ ಧರ್ಮಗಳಲ್ಲಿಯೂ ಮುಂಚೂಣಿಯಲ್ಲಿದ್ದ. ಇವೆಲ್ಲದರ ಜೊತೆಗೆ ಅಚ್ಚುಕಟ್ಟಾಗಿ ಲೆಕ್ಕ ಪತ್ರಗಳನ್ನು ನಿರ್ವಹಿಸಿಕೊಂಡು ಬಂದಿದ್ದ.
ಹೀಗೆ ವ್ಯಾಪಾರಿಯ ಜೀವನ ನಡೆದುಕೊಂಡು ಬರುತ್ತಿತ್ತು. ಈ ಸುಸಮಯದಲ್ಲಿ ತನ್ನ ಮಗಳ ಮದುವೆಯನ್ನು ಯೋಗ್ಯ ವರನೊಂದಿಗೆ ಬಹಳ ಅಚ್ಚುಕಟ್ಟಾಗಿ ನೆರವೆರಿಸಿದ. ಸುತ್ತೆಲ್ಲ ಊರಿನವರಿಗೆ ಅನ್ನದಾನ ಮಾಡಿದ. ಇದರಿಂದ ಶ್ರೇಷ್ಠಿಯ ಉತ್ತಮ ನಡವಳಿಕೆಯ ಬಗ್ಗೆ ಎಲ್ಲೆಡೆಯಲ್ಲಿಯೂ ಗುಣಗಾನ ಮಾಡಲಾರಂಭಿಸಿದರು.

ಇದನ್ನು ಸಹಿಸದ ಕೆಲವರಿಗೆ ಹೊಟ್ಟೆಯುರಿ ಪ್ರಾರಂಭವಾಯಿತು. ಈತನ ಬಗ್ಗೆ ಅಪಪ್ರಚಾರ ಮಾಡಲಾರಂಬಿಸಿದರು. ವ್ಯಾಪಾರದಲ್ಲಿ ಮೋಸ ಮಾಡುತ್ತಾನೆ, ತೆರಿಗೆ ಕಟ್ಟದೇ ವಂಚಿಸಿದ್ದಾನೆ ಎಂದು ಸುಳ್ಳು ಆರೋಪ ಮಾಡತೊಡಗಿದರು. ಆದರೂ ಶ್ರೇಷ್ಠಿ ತಲೆ ಕೆಡಿಸಿಕೊಳ್ಳದೇ ತನ್ನ ಪಾಡಿಗೆ ತಾನಿದ್ದ. ಇದರಿಂದ ಕುಪಿತರಾದ ವಿರೋಧಿಗಳು ಮೈಸೂರು ರಾಜರಲ್ಲಿಗೆ ಹೋಗಿ ಈ ವ್ಯಾಪಾರಿಯ ಶ್ರೀಮಂತಿಕೆಯ ಕುರಿತು, ಮಗಳ ಮದುವೆಯ ವೈಭವದ ಬಗ್ಗೆ ಹೇಳಿ, ತೆರಿಗೆ ವಂಚಕ ಮತ್ತು ಮೋಸದ ವ್ಯಾಪಾರಿ ಎಂದು ಚಾಡಿ ಹೇಳಿದರು.

ಇದರಿಂದ ಕೋಪಗೊಂಡ ಮಹಾರಾಜರು ಗೂಢಚಾರರನ್ನು ಕಳುಹಿಸಿ ಅವನ ಸಂಪತ್ತಿನ ಬಗ್ಗೆ, ಮಗಳ ಮದುವೆಯ ಖರ್ಚಿನ ಬಗ್ಗೆ ಮಾಹಿತಿ ಕಲೆಹಾಕಿದರು. ಇತನ ಸಂಪತ್ತನ್ನು ಅಂದಾಜಿಸಿ ಇಷ್ಟೊಂದು ಹಣ, ಶ್ರೀಮಂತಿಕೆಯನ್ನು ಮೋಸದಿಂದ ಸಂಪಾದಿಸಿರಬಹುದೆಂದು ತಿಳಿದರು. ಕೂಡಲೇ ರಾಜಭಟರನ್ನು ಕಳುಹಿಸಿ ಮನೆಯನ್ನೆಲ್ಲಾ ಶೋಧಿಸಿಸಿದರು. ಮನೆಯಲ್ಲಿ ಸಿಕ್ಕ ಒಡವೆಗಳು, ಚಿನ್ನ, ಹಣ ಸಂಪತ್ತನ್ನೆಲ್ಲಾ ಒಟ್ಟುಗೂಡಿಸಿ ಬಂಡಿಗಳಲ್ಲಿ ಹೇರಿಕೊಂಡು ಅರಮನೆಗೆ ಬಂದರು.

ಇತ್ತ ಮನೆಗೆ ಬಂದು ವಿಷಯ ತಿಳಿದ ಶ್ರೇಷ್ಠಿಯು ಕೊಂಚವೂ ವಿಚಲಿತವಾಗದೆ ತನ್ನ ಖರ್ಚು ವೆಚ್ಚಗಳ ಪಟ್ಟಿಯನ್ನು, ಲೆಕ್ಕಪತ್ರಗಳನ್ನು, ಲಾಭನಷ್ಟ ಮತ್ತು ತೆರಿಗೆ ಕಟ್ಟಿದ ವಿವರಗಳನ್ನು ತೆಗೆದುಕೊಂಡು ಬಂದು ರಾಜನ ಬಳಿ ವಿವರಿಸಿದಾಗ ವ್ಯಾಪಾರಿಯ ಪ್ರಾಮಾಣಿಕತೆಯ ಬಗ್ಗೆ ಅರಿವಾಗುತ್ತದೆ. ಇದರಿಂದ ವಿಚಲಿತರಾದ ಮಹಾರಾಜರು ಶ್ರೇಷ್ಠಿಯ ಮನೆಯಿಂದ ತಂದ ಎಲ್ಲವನ್ನೂ ಮರಳಿ ಬಂಡಿಗಳಲ್ಲಿ ಅವನ ಮನೆಗೆ ಕಳುಹಿಸಿಕೊಡುತ್ತಾರೆ.

ಆದರೆ ಇತ್ತ ತನ್ನ ಮನೆಯಲ್ಲಿ ಶ್ರೇಷ್ಟಿ ಈ ಎಲ್ಲ ಸಂಪತ್ತನ್ನು ಮರಳಿ ತೆಗೆದುಕೊಳ್ಳಲು ನಿರಾಕರಿಸುತ್ತಾನೆ. ಗುರುಮನೆಗೆ ಮತ್ತು ಅರಮನೆಗೆ ಹೋದ ಸ್ವತ್ತನು ತಾನು ತೆಗೆದುಕೊಳ್ಲುವುದಿಲ್ಲ ಎಂದು ಖಡಾಖಂಡಿತವಾಗಿ ತಿಳಿಸುತ್ತಾನೆ.

 

 

ಇತ್ತ ಕಂಗಾಲಾದ ರಾಜಭಟರು ಇತ್ತ ತೆಗೆದುಕೊಳ್ಳದೆ ಅತ್ತ ಮರಳಿ ಹೋಗಲಾರದೆ ಶ್ರೇಷ್ಠಿಯ ಮನೆಯ ಬಾಗಿಲಿನಲ್ಲಿ ಸುರಿದು ಹೋಗುತ್ತಾರೆ. ಹಲವಾರು ದಿನಗಳಾದರೂ ಶ್ರೇಷ್ಟಿ ಅದನ್ನು ಮುಟ್ಟದೇ ಕಾವಲುಗಾರರನ್ನು ನೇಮಿಸಿ ರಾಜನ ಆಜ್ಞೆಗಾಗಿ ಕಾಯುತ್ತಾ ಇರುತ್ತಾನೆ

ಈ ವಿಚಾರವನ್ನು ತಿಳಿದ ಮೈಸೂರಿನ ಮಹಾರಾಜರು ತಾವೇ ಖುದ್ದಾಗಿ ಆ ವ್ಯಾಪಾರಿಯ ಬಳಿ ತೆರಳಿ ಚಾಡಿಕೋರರ ಮಾತು ಕೇಳಿ ತಮ್ಮಿಂದ ಆದ ಪ್ರಮಾದವನ್ನು ತಿಳಿಸುತ್ತಾರೆ. ಈ ಸಮಯದಲ್ಲಿ ಶ್ರೇಷ್ಠಿಯು ಮಹಾರಾಜರಿಗೆ ಒಂದು ಶರತ್ತನ್ನು ವಿಧಿಸುತ್ತಾನೆ. ಅದರ ಪ್ರಕಾರವಾಗಿ ಈ ಸಂಪತ್ತನ್ನು ರಾಜ್ಯದ ಖಜಾನೆಗೆ ತೆಗೆದುಕೊಂಡು ಅದರಿಂದ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಬಿಷೇಕವನ್ನು ಅಚ್ಚುಕಟ್ಟಾಗಿ ನಡೆಸಿಕೊಡುವಂತೆ ಕೇಳಿಕೊಳ್ಳುತ್ತಾನೆ. ಇದಕ್ಕೆ ಒಪ್ಪಿದ ಮಹಾರಾಜರು ನಂತರದ ವರ್ಷಗಳಲ್ಲಿ ನಡೆದ ಎಲ್ಲಾ ಮಸ್ತಕಾಭಿಷೇಕಗಳಿಗೆ ಸುವ್ಯವಸ್ಥೆ ಮಾಡಿಕೊಟ್ಟು ಪೂಜಾದಿ ಕಾರ್ಯಗಳನ್ನು ನೆರವೆರಿಸಿಕೊಂಡು ಬಂದಿರುತ್ತಾರೆ.

ಈ ಪದ್ದತಿ ಹೀಗೆ ಮುಂದುವರಿದು ಮೈಸೂರು ಸಂಸ್ಥಾನ ಕರ್ನಾಟಕ ರಾಜ್ಯದಲ್ಲಿ ವಿಲೀನಗೊಳ್ಳುವ ಸಮಯದಲ್ಲಿ ಮೈಸೂರಿನ ರಾಜರು ಸರ್ಕಾರದೊಂದಿಗೆ ಕೆಲವು ಒಡಂಬಡಿಕೆ ಮಾಡಿಕೊಳ್ಳುತ್ತಾರೆ. ಅವುಗಳಲ್ಲಿ ತಮಗೆ ಸೇರಬೇಕಾದ ಆಸ್ತಪಾಸ್ತಿಗಳು, ಅಧಿಕಾರ ವ್ಯಾಪ್ತಿ, ತಮ್ಮ ಸಂಸ್ಥಾನಕ್ಕೆ ಸೇರಿದ ದೇವಾಲಯಗಳು, ಬಸದಿಗಳು, ದಸರಾ ಆಚರಣೆ ಮುಂತಾದವುಗಳು ಸೇರಿವೆ. ಅದರಲ್ಲಿ ಶ್ರವಣಬೆಳಗೊಳದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಮೂಲಸೌಕರ್ಯ ಮತ್ತು ಪೂಜಾವ್ಯವಸ್ಥೆಯನ್ನೂ ಅಂದಿನ ಸಮಯದಲ್ಲೇ ಸೇರಿಸಿದ್ದಾರೆ.

ಈ ಕಾರಣದಿಂದ ಸರ್ಕಾರವು ನಂತರದ ದಿನಗಳಲ್ಲಿ ಮಹಾಮಸ್ತಕಾಭಿಷೇಕಕ್ಕೆ ವ್ಯವಸ್ಥೆ ಮಾಡುತ್ತಾ ಬಂದಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top