ಮನೋರಂಜನೆ

ಕುತೂಹಲ ಕೆರಳಿಸಿದ ಕೆಜಿಎಫ್ ಚಿತ್ರದ ಈ ಹೊಸ ಡೈಲಾಗ್:ಈಗ ಯಶ್ ಡೈಲಾಗ್‍ದೇ ಹವಾ..

ನಾನಾ ಕಾರಣಗಳಿಂದ ಪ್ರೇಕ್ಷಕರ ವಲಯದಲ್ಲಿ ವಿಪರೀತ ಕುತೂಹಲ ಹುಟ್ಟುಹಾಕಿರುವ ಚಿತ್ರ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ. ಈ ಹಿಂದೆ ಉಗ್ರಂ ಎಂಬ ಸೂಪರ್ ಹಿಟ್ ಚಿತ್ರ ಕೊಟ್ಟಿದ್ದ ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ ಅದೇಕೋ ಮುಗಿಯುವಂತೆಯೇ ಕಾಣಿಸುತ್ತಿಲ್ಲ. ಯಶ್ ಅಭಿಮಾನಿಗಳೂ ಕೂಡಾ ಕಾದೂ ಕಾದು ಸುಸ್ತೆದ್ದಿದ್ದಾರೆ.

 

 

ಇಂಥಾದ್ದರ ನಡುವೆ ಇದೀಗ ಈ ಚಿತ್ರದ ಡೈಲಾಗ್‌ವೊಂದು ಬಿಡುಗಡೆ ಯಾಗಿದ್ದು, ಇದು ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಕೆರಳಿಸಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿರುವ ಈ ಡೈಲಾಗ್ ಈ ರೀತಿ ಇದೆ. “ರಕ್ತದ ವಾಸನೆ ಕಂಡು ಬೇಜಾನ್ ಮೀನುಗಳು ಒಟ್ಟಿಗೆ ಬಂದ್ ಬಿಡ್ತವೆ, ಆದರೆ ಆ ಮೀನು ಗಳಿಗೆ ಗೊತ್ತಿಲ್ಲ, ಆ ರಕ್ತ ಮೀನುಗಳನ್ನ ಬೇಟೆ ಆಡುವ ತಿಮಿಂಗಲದ್ದು ಅಂತ’”

ಈ ಡೈಲಾಗನ್ನು ಸ್ವತಃ ರಾಕಿಂಗ್ ಸ್ಟಾರ್ ಯಶ್ ಅವರೇ ಬಹಿರಂಗ ಪಡಿಸಿದ್ದಾರೆ. ಇದಕ್ಕೂ ಮುಂಚೆ ಇದೇ ಚಿತ್ರದ “ಇನ್ಮೇಲಿಂದ ಅವಳಪ್ಪ ನನ್ ಮಾವ, ನಾನು ನಿಮ್ಮೆಲ್ಲರಿಗೂ ಭಾವ. ನಿಮ್ಮಕ್ಕನ್ ಚೆನ್ನಾಗ್ ನೋಡ್ಕಳ್ರೋ, ಚೆನ್ನಾಗ್ ನೋಡ್ಕಳಿ” ಎಂಬ ಡೈಲಾಗನ್ನು ಯಶ್ ಬಹಿರಂಗಗೊಳಿಸಿದ್ದರು.

 

 

ಈಗಾಗಲೇ ಬಿಡುಗಡೆಯಾಗಿರುವ ಫೋಟೋಗಳಲ್ಲಿ ಯಶ್ ಅವರ ಡಿಫರೆಂಟ್ ಲುಕ್ ಅಭಿಮಾನಿಗಳ ಗಮನ ಸೆಳೆದಿದೆ. ಅವರಿಲ್ಲಿ ಈ ಹಿಂದೆ ಯಾವ ಚಿತ್ರದಲ್ಲಿಯೂ ಕಾಣಿಸಿಕೊಂಡಿರದಂಥಾ ಮಾಸ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಚಿತ್ರೀಕರಣವಾಗಲಿರೋ ದೃಷ್ಯಗಳೂ ಕೂಡಾ ಅಂಥಾದ್ದೇ ಖದರ್ ಹೊಂದಿವೆಯಂತೆ.

ಹೊಂಬಾಳೆ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಭುವನ್ ಗೌಡ ಅವರ ಛಾಯಾಗ್ರಹಣವಿದೆ. ಅದೂ ಕೂಡಾ ಈ ಚಿತ್ರದ ಆಕರ್ಷಣೆಗಳಲ್ಲೊಂದು. ಇನ್ನುಳಿದಂತೆ ರವಿ ಬಸ್ರೂರು ಸಂಗೀತ ನಿರ್ದೇಶನವಿದೆ. ಈಗ ಕೆಜಿಎಫ್ ಸೃಷ್ಟಿಸಿರುವ ವ್ಯಾಪಕ ಹವಾ ಗಮನಿಸಿದರೆ ಈ ಚಿತ್ರ ಅದೇನೋ ಕಮಾಲ್ ಮಾಡುತ್ತದೆ ಎಂಬಂಥಾ ವಾತಾವರಣವಿರೋದಂತೂ ನಿಜ!

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top