ಸಮಾಚಾರ

ಎಟಿಎಂ ಮೂಲಕ ಹೀರೋ ಆದ್ರು ಹಾಸನದ ಹುಡುಗ ವಿನಯ್

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ನಾನಾ ಪಾತ್ರಗಳ ಮೂಲಕ ಪರಿಚಿತರಾಗಿರುವವರು ವಿನಯ್ ಗೌಡ. ಬಹುಶಃ ವಿನಯ್ ಅಂದರೆ ತಕ್ಷಣಕ್ಕೆ ಗುರುತು ಹತ್ತೋದು ಕಷ್ಟ. ಯಾಕೆಂದರೆ, ಅವರು ಬೇರೆ ಬೇರೆ ಪಾತ್ರಗಳ ಮೂಲಕವೇ ಪ್ರೇಕ್ಷಕರ ಮನಸಲ್ಲಿ ನೆಲೆಯೂರಿದ್ದಾರೆ. ಇಂಥಾ ವಿನಯ್ ಗೌಡ ಎಟಿಎಂ ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ.

 

 

ಮೂಲತಃ ಹಾಸನದ ಹುಡುಗ ವಿನಯ್. ಅಲ್ಲಿನ ದುದ್ದ ಹೋಬಳಿಯ ಹೆರಗು ವಿನಯ್ ಅವರ ಸ್ವಂತ ಊರು. ಆದರೆ ಓದಿ ಬೆಳೆದಿದ್ದೆಲ್ಲವೂ ಬೆಂಗಳೂರಿನಲ್ಲಿಯೇ. ಓದಿಗೂ ಇವರ ಆಸಕ್ತಿಗೂ ಎತ್ತಣಿಂದೆತ್ತ ಸಂಬಂಧವೂ ಇಲ್ಲ. ಹೇಳಿಕೊಳ್ಳುವಂಥಾ ಕಲೆಯ ವಾತಾವರಣ ಇರದಿದ್ದ ಕುಟುಂಬವೊಂದರಿಂದ ಬಂದಿರುವ ವಿನಯ್ ನಟನಾಗಿ ರೂಪುಗೊಂಡಿದ್ದೇ ಒಂದು ಅಚ್ಚರಿ. ಕೆಎಲ್‌ಇ ಕಾಲೇಜಿನಲ್ಲಿ ಪದವಿ ಪೂರೈಸಿಕೊಂಡು, ದಯಾನಂದ ಸಾಗರ್ ಕಾಲೇಜಿನಲ್ಲಿ ಎಂಬಿಎ ಮುಗಿಸಿಕೊಂಡ ವಿನಯ್ ಕಾಲೇಜು ದಿನಗಳಲ್ಲಿಯೇ ಮಾಡೆಲಿಂಗ್‌ನಲ್ಲಿ ಮಿಂಚಿದ್ದರು. ಓದೆಲ್ಲ ಮುಗಿಯುವ ಹೊತ್ತಿಗೆ ಅವರು ಆಕರ್ಷಿತರಾಗಿದ್ದು ರಂಗಭೂಮಿಯತ್ತ!

 

 

ಜಯದೇವ್ ಅವರ ತ್ರಿಶಂಕು ತಂಡದ ಮೂಲಕ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ವಿನಯ್ ಅವರು ದುನಿಯಾ ವಿಜಯ್ ಮುಂತಾದ ನಟರೊಂದಿಗೇ ರಂಗ ತಾಲೀಮು ನಡೆಸಿದ್ದರು. ಹೀಗೆ ತರಬೇತಿ ಹೊಂದಿದ ವಿನಯ್ ಮೊದಲು ನಟಿಸಿದ ನಾಟಕ `ತ್ರಿಶಂಕು’. ಆ ಮೂಲಕ ನಟನೆಗೆ ಅಡಿಯಿರಿಸಿದ ವಿನಯ್ ಆ ನಂತರ ಹತ್ತಾರು ನಾಟಕಗಳಲ್ಲಿ ಅಭಿನಯಿಸಿದ್ದರು. ಅದರ ಬಲದಿಂದಲೇ ಮೊದಲ ಸಲ ವಿನು ಬಳಂಜ ನಿರ್ದೇಶನದ ಸೂಪರ್ ಹಿಟ್ ಧಾರಾವಾಹಿ ಜೋಗುಳದಲ್ಲಿಯೂ ಗಮನಾರ್ಹ ಪಾತ್ರದಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ದರು.

 

 

ಆ ನಂತರ ನಿನ್ನೊಲುಮೆಯಿಂದಲೇ, ಮುಕ್ತ ಮುಕ್ತ ಮುಂತಾದ ಧಾರಾವಾಹಿಗಳ ಮೂಲಕ ಕಿರುತೆರೆ ಜಗತ್ತಿನಲ್ಲಿ ನೆಲೆ ನಿಂತಿದ್ದರು. ಈ ನಡುವೆ ಮತ್ತೆ ಮುಂಗಾರು ಚಿತ್ರದಲ್ಲಿಯೂ ಗಮನಾರ್ಹ ಪಾತ್ರವೊಂದರಲ್ಲಿ ವಿನಯ್ ಕಾಣಿಸಿಕೊಂಡಿದ್ದರು. ತಾನೊಬ್ಬ ಪರಿಪೂರ್ಣ ನಟನಾಗಿ ರೂಪುಗೊಳ್ಳಬೇಕೆಂಬ ಹಂಬಲ ಹೊಂದಿದ್ದ ವಿನಯ್ ನಾಯಕ ನಟನಾಗಲು ಒಂದೊಳ್ಳೆ ಕಥೆಯ ತಲಾಷಿನಲ್ಲಿದ್ದರು. ಅದೀಗ ಎಟಿಎಂ ಚಿತ್ರದ ಮೂಲಕ ಸಾಕಾರಗೊಂಡಿದೆ.

 

 

ಎಟಿಎಂ ಚಿತ್ರದಲ್ಲಿ ವಿನಯ್ ಬಯಸಿದ್ದಂಥಾದ್ದೇ ಖಡಕ್ ಪೊಲೀಸ್ ಅಧಿಕಾರಿಯ ನಾಯಕನ ಪಾತ್ರ ಸಿಕ್ಕಿದೆ. ಇದುವೇ ಚಿತ್ರರಂಗದಲ್ಲಿ ಮತ್ತಷ್ಟು ಅವಕಾಶಗಳನ್ನು ಸೃಷ್ಟಿಸುತ್ತದೆ ಎಂಬ ಭರವಸೆಯೂ ವಿನಯ್ ಅವರಿಗಿದೆ. ರಗಡ್ ಲುಕ್ಕಿನ ಖಡಕ್ ಪಾತ್ರಗಳನ್ನು ಮಾಡುವ ಇರಾದೆ ಹೊಂದಿರುವ ಅವರು ಪೌರಾಣಿಕ ಪಾತ್ರಗಳನ್ನು ಮಾಡುವ ಕನಸನ್ನೂ ಹೊಂದಿದ್ದಾರೆ. ಅದೆಲ್ಲವೂ ಕೈಗೂಡಲೆಂದು ಹಾರೈಸೋಣ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top