ಸಿನಿಮಾ

ಜಾನಿ ಜಾನಿ ಎಸ್ ಪಪ್ಪ – ಸ್ಪೆಷಲ್ ಏನೈತಪ್ಪ?

ದುನಿಯಾ ವಿಜಯ್ ಮತ್ತು ನಿರ್ದೆಶಕ ಪ್ರೀತಂ ಗುಬ್ಬಿ ಕಾಂಬಿನೇಷನ್ನಿನ ಎರಡನೇ ಚಿತ್ರ `ಜಾನಿ ಜಾನಿ ಎಸ್ ಪಪ್ಪ’. ವಿಜಿ ತಮ್ಮ ಹೋಂ ಬ್ಯಾನರ್ ದುನಿಯಾ ಟಾಕೀಸ್‌ನಿಂದ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದುವರೆಗೂ ಆರ್ದ್ರ ಶೈಲಿಯ ಒಂದಷ್ಟು ಚಿತ್ರಗಳನ್ನು ನಿರ್ದೇಶನ ಮಾಡಿರುವ ಪ್ರೀತಂ ಮತ್ತು ವಿಜಿ ಕಾಂಬಿನೇಷನ್ ಈ ಬಾರಿ ಕಮಾಲ್ ಸೃಷ್ಟಿಸುತ್ತದೆಂಬುದಕ್ಕೆ ಚಿತ್ರದ ಹಾಡುಗಳಿಗೆ ಸಿಕ್ಕಿರುವ ವ್ಯಾಪಕ ಮನ್ನಣೆಗಿಂತ ಬೇರೆ ಸಾಕ್ಷಿ ಬೇಕಿಲ್ಲ!

 

 

ಧನಂಜಯ್ ಸಾಹಿತ್ಯದ ಎಲ್ಲ ಹಾಡುಗಳೂ ಅಜನೀಶ್ ಲೋಕನಾಥ್ ಸಂಗೀತದಲ್ಲಿ ಜನ ಮನ ಗೆದ್ದಿವೆ. ತಮ್ಮ ಭಿನ್ನ ಬಗೆಯ ಸಂಗೀತದ ಪಟ್ಟುಗಳಿಂದ ಪ್ರತೀ ಚಿತ್ರದಲ್ಲಿಯೂ ಹೊಸಾ ಅಲೆ ಸೃಷ್ಟಿಸುವ ಅಜನೀಶ್ ಜಾನಿ ಜಾನಿ ಎಸ್ ಪಪ್ಪ ಚಿತ್ರಕ್ಕೂ ಮನಸೂರೆಗೊಳ್ಳುವಂಥಾ ಹಾಡುಗಳನ್ನು ಕೊಟ್ಟಿದ್ದಾರೆ. ಎಫೆಂ ಸೇರಿದಂತೆ ಎಲ್ಲೆಡೆ ಈ ಹಾಡುಗಳು ಟಾಪ್ ಟೆನ್ ಲಿಸ್ಟಿನಲ್ಲಿ ಸದ್ಯ ಖಾಯಂ ಸ್ಥಾನ ಪಡೆದುಕೊಂಡಿವೆ.

 

ಈ ಚಿತ್ರ ಆರಂಭವಾದ ರಸವತ್ತಾದ ಕಥೆಯನ್ನೂ ಕೂಡಾ ಹಾಡಿನ ನೆಪದಲ್ಲಿಯೆ ದುನಿಯಾ ವಿಜಿ ಬಿಚ್ಚಿಟ್ಟಿದ್ದಾರೆ. ಸಾಮಾನ್ಯವಾಗಿ ಒಂದು ಚಿತ್ರ ಆರಂಭವಾಗಬೇಕೆಂದರೆ ಅದೆಷ್ಟೋ ಸಿಟ್ಟಿಂಗುಗಳು, ಮೀಟಿಂಗುಗಳು ನಡೆಯುತ್ತವೆ. ಆದರೆ ಜಾನಿ ಜಾನಿ ಎಸ್ ಪಪ್ಪ ಚಿತ್ರ ಆರಂಭವಾದದ್ದು ಒಂದೇ ಒಂದು ಫೋನ್ ಕಾಲಿಂದ. ಆರಂಭದಲ್ಲಿ ವಿಜಿ ಮತ್ತು ಪ್ರೀತಂ ಗುಬ್ಬಿ ನಡುವೆ ಫೋನಿನಲ್ಲೇ ಮಾತುಕತೆ ನಡೆಯಿತಂತೆ. ಅಲ್ಲಿಯೇ ಕಥೆಯ ಎಳೆಗೆ ಒಪ್ಪಿಗೆ ಸೂಚಿಸಿದ ವಿಜಿ ಹಸಿರು ನಿಶಾನೆ ತೋರಿಸುವ ಮೂಲಕ ಈ ಚಿತ್ರ ಶುಭಾರಂಭಗೊಂಡಿತ್ತು!

 

 

ಪ್ರೀತಂ ಗುಬ್ಬಿಯವರಿಗೆ ವಿಜಿ ಜೊತೆಗಿದು ಎರಡನೇ ಚಿತ್ರ. ಈಗಿನ ಪ್ರೇಕ್ಷಕರು ಏನು ಬಯಸುತ್ತಿದ್ದಾರೆಂಬುದನ್ನು ಗಮನದಲ್ಲಿಟ್ಟುಕೊಂಡು ಎಲ್ಲ ವರ್ಗದ ಪ್ರೇಕ್ಷಕರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಪ್ರೀತಂ ಈ ಚಿತ್ರವನ್ನು ತಯಾರು ಮಾಡಿದ್ದಾರಂತೆ. ಅಂದಹಾಗೆ ಇದುವರೆಗೂ ಹಾಸ್ಯ ಪಾತ್ರಗಳಲ್ಲಿ ತೊಡಗಿಸಿಕೊಂಡಿದ್ದ ತಬಲಾ ನಣಿ ಈ ಚಿತ್ರಕ್ಕೆ ಸಂಭಾಷಣೆ ಬರೆದಿರೋದು ವಿಶೇಷ.

ಗೋವಾದಲ್ಲಿ ಅಂತಿಮ ಹಂತದ ಚಿತ್ರೀಕರಣವನ್ನು ಪೂರೈಸಿಕೊಂಡಿರೋ ಈ ಚಿತ್ರದಲ್ಲಿ ಪದ್ಮಾವತಿ ಗೀತೆ ಪ್ರಮುಖ ಆಕರ್ಷಣೆಯಾಗೋ ಎಲ್ಲ ಲಕ್ಷಣಗಳೂ ಇವೆ. ರಚಿತಾ ರಾಮ್ ಈ ಹಾಡಿನಲ್ಲಿ ಎನರ್ಜಿಟಿಕ್ ಆಗಿ ಕಾಣಿಸಿಕೊಂಡಿದ್ದಾರಂತೆ. ರಚಿತಾ ತಮ್ಮ ಪಾತ್ರಕ್ಕೆ ತಾವೇ ವಾಯ್ಸ್ ಡಬ್ ಮಾಡಿರೋದು ಮತ್ತೊಂದು ವಿಶೇಷ.

 

 

ಇಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿರುವ ಜಾನಿ ಜಾನಿ ಎಸ್ ಪಪ್ಪ ಇದೇ ವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top