ಸಿನಿಮಾ

ಈ ವಾರ ತೆರೆಗೆ ಬರಲಿದೆ ‘ಹೀಗೊಂದು ದಿನ’

ಮಹಿಳಾ ದಿನದಂದೇ ತೆರೆಗೆ ಬರಲು ತಯಾರಿ ಮಾಡಿಕೊಂಡಿದ್ದ ಚಿತ್ರ ಹೀಗೊಂದು ದಿನ. ಆದರೆ ಚಿತ್ರಮಂದಿರಗಳ ಬಂದ್ ಕಾರಣದಿಂದ ಮುಂದೆ ಹೋಗಿದ್ದ ಈ ಚಿತ್ರ ಈ ವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.
ಹೀಗೆ ಬಂದ್ ಕಾರಣದಿಂದ ಈ ಚಿತ್ರದ ಬಿಡುಗಡೆಯ ದಿನಾಂಕ ಮುಂದೆ ಹೋಗಿದ್ದರಿಂದ ನಿರೀಕ್ಷೆಗಳು ಹೆಚ್ಚಾಗಿವೆಯೇ ಹೊರತು ಕಡಿಮೆಯಾಗಿಲ್ಲ. ಬಹುಶಃ ಮಾಮೂಲಿ ವರಸೆಯ ಚಿತ್ರವಾಗಿದ್ದರೆ ಜನ ಅಷ್ಟಾಗಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲವೇನೋ. ಆದರೆ ಸಿಂಧು ಲೋಕನಾಥ್ ಅಭಿನಯದ ಈ ಚಿತ್ರ ಹೊಸತನದಿಂದಲೇ ಗಮನ ಸೆಳೆದಿದೆ. ಆ ಕಾರಣದಿಂದಲೇ ಟಾಕ್ ಕ್ರಿಯೇಟ್ ಮಾಡಿದೆ. ಹೇಳಿದ್ದಕ್ಕಿಂತ ಕೊಂಚ ತಡವಾದರೂ ಪ್ರೇಕ್ಷಕರು ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.
ದಿವ್ಯದೃಷ್ಟಿ ಚಂದ್ರಶೇಖರ್ ಅವರು ಹೊಸತೇನನ್ನೋ ಸೃಷ್ಟಿಸುವ ಕನಸಿಟ್ಟುಕೊಂಡು ನಿರ್ಮಾಣ ಮಾಡಿರುವ ಚಿತ್ರ ಹೀಗೊಂದು ದಿನ. ಸಿಂಧು ಲೋಕನಾಥ್ ಈ ವರೆಗೂ ನಿರ್ವಹಿಸಿರದಂಥಾ ಚೆಂದದ, ಸವಾಲಿನ ಪಾತ್ರವೊಂದನ್ನು ಈ ಚಿತ್ರದಲ್ಲಿ ನಿಭಾಯಿಸಿದ್ದಾರಂತೆ. ಅದೇನೋ ಗುರಿಯಿಟ್ಟುಕೊಂಡು ಹೊರ ಬೀಳುವ ಹುಡುಗಿಯೊಬ್ಬಳ ಬದುಕಲ್ಲಿ ಒಂದು ಸದಿನದಲ್ಲಿ ನಡೆಯುವ ಘಟನಾವಳಿಗಳ ರೋಚಕ ವಿವರವನ್ನು ಈ ಚಿತ್ರ ಒಳಗೊಂಡಿದೆ.
ಈಗಾಗಲೇ ಈ ಚಿತ್ರದ ಟ್ರೈಲರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ಮೆಚ್ಚಿಕೊಂಡಿರುವ ಜನ ಸ್ವಯಂಪ್ರೇರಿತರಾಗಿ ಹೀಗೊಂದು ದಿನಕ್ಕೆ ಸಾಥ್ ನೀಡಲಾರಂಭಿಸಿದ್ದಾರೆ. ಇದೆಲ್ಲ ಸಾಧ್ಯವಾಗಿರೋದು ಈ ಚಿತ್ರದ ಹೊಸ ಆಲೋಚನೆಗಳಿಂದ. ಸಾಮಾನ್ಯವಾಗಿ ಚಿತ್ರ ಮಾಡುವವರು ಹೊಂದಿರುವ ಸಿದ್ಧ ಸೂತ್ರದ ಮೆಂಟಾಲಿಟಿಯಾಚೆಗೆ ಈ ಚಿತ್ರ ತಂಡ ಕಾರ್ಯನಿರ್ವಹಿಸಿದೆ. ಆದ್ದರಿಂದಲೇ ಭರಪೂರವಾದೊಂದು ಗೆಲುವಿನ ನಿರೀಕ್ಷೆಯೂ ಇದೆ.
ದಿವ್ಯ ದೃಷ್ಟಿ ಕ್ರಿಯೇಷನ್  ಅಡಿಯಲ್ಲಿ ತಯಾರಾಗಿರುವ `ಹೀಗೊಂದು ದಿನ’. ಸಿಂಧು ಲೋಕನಾಥ್ ಅವರ ಮುಖ್ಯ ತಾರಗಣದ ಚಿತ್ರದಲ್ಲಿ ಅವರಿಗೆ ಒಂದೇ ಜೊತೆ ಬಟ್ಟೆ ಇಡೀ ಚಿತ್ರದಲ್ಲಿ. ವಿಕ್ರಮ್ ಯೋಗಾನಂದ್ ಅವರ ನಿರ್ದೇಶನದಲ್ಲಿ ತಯಾರಾಗಿದೆ. ಪ್ರವೀಣ್ ತೇಜ್, ಗುರುಪ್ರಸಾದ್, ಪದ್ಮಜ ರಾವ್, ನಾಗೇಂದ್ರ ಷಾ, ಶೋಭರಾಜ್, ಮಿತ್ರ, ಗಿರಿ, ಬಾಲನ್ ಮನೋಹರ್, ಗಿರಿಜ ಲೋಕೇಶ್ ಅವರ ಅಭಿನಯದ ಚಿತ್ರವನ್ನೂ ದಿವ್ಯ ದೃಷ್ಟಿ ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ. ಪರಶುರಾಮ್ ಕಾರ್ಯಕಾರಿ ನಿರ್ಮಾಪಕರು.
ವಿಕಾಸ್ ಅವರ ಕಥೆಗೆ, ನಿರ್ದೇಶಕ ವಿಕ್ರಮ್ ಯೋಗಾನಂದ್ ಅವರೇ ಛಾಯಾಗ್ರಹಕರು, ಸಂಕಲನಕಾರರು ಹಾಗೂ ವಿಷುವಲ್ ಎಫ್ಫೆಕ್ಟ್ ಸಹ ನೀಡಿದ್ದಾರೆ, ಅಭಿಲಾಷ್ ಗುಪ್ತ ಸಂಗೀತ, ರಾಮಕೃಷ್ಣ ರಣಗಟ್ಟಿ ಗೀತ ಸಾಹಿತ್ಯ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top